ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣ : ರಾಜ್ಯ ಸರ್ಕಾರ ಜಾರಿ ತಂದ ಕಾನೂನು ಎತ್ತಿ ಹಿಡಿದ ಸುಪ್ರೀಂಕೋರ್ಟ್

ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿ ತಂದಿದ್ದ ತತ್ಪರಿಣಾಮ ಜೇಷ್ಠತಾ ಮೀಸಲಾತಿ ಕಾನೂನು ಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಕುರಿತ ತೀರ್ಪನ್ನು ಇಂದು ಪ್ರಕಟಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಶಾಸನ ಸಭೆಯು ರೂಪಿಸಿರುವ ನೂತನ ಕಾಯ್ದೆಗೆ ರಾಷ್ಟ್ರಪತಿಯವರು ಅಂಕಿತ ದೊರೆತಿದ್ದು, ಅದರ ಸಿಂಧುತ್ವಕ್ಕೆ ಪೂರಕ ಎಂದು ಅಭಿಪ್ರಾಯಪಟ್ಟರು.

ಕೆನೆ ಪದರದ ತತ್ವವೂ ಸಹ ಈ ಕಾಯ್ದೆಯ ಜಾರಿಯಲ್ಲಿ ಅನ್ವಯವಾಗದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿರುವ ಗ್ರೂಪ್ ಡಿ ಹಂತದ ಸಿಬ್ಬಂದಿಗೆ ಮೀಸಲಾತಿ ನೀಡುವಾಗ ಮಾತ್ರ ಈ ತತ್ವ ಅನ್ವಯಿಸಬಹುದು. ಆದರೆ, ತತ್ಪರಿಣಾಮದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ ಆಗಿರುವುದರಿಂದ ಕೇವಲ ಉನ್ನತ ಮಟ್ಟದ ಅಧಿಕಾರಿಗಳು ಇದರ ಲಾಭ ಪಡೆಯುವುದರಿಂದ ಕಾಯ್ದೆಯನ್ನು ಮಾನ್ಯ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.

ಸುಪ್ರೀಂಕೋರ್ಟ್ ತೀರ್ಪಿನಿಂದ ಸುಮಾರು ಮೂರು ಸಾವಿರಕ್ಕೂ ಅಧಿಕ ಎಸ್ಸಿ ಎಸ್ಟಿ ನೌಕಕರಿಗೆ ಲಾಭ ಆಗಲಿದ್ದು ಹಿಂಬಡ್ತಿ ಹೊಂದುವ ಭಯದಲ್ಲಿದ್ದ ನೌಕರರು ಸುಪ್ರೀಂಕೋರ್ಟ್ ತೀರ್ಪುನಿಂದ ನಿರಾಳರಾಗಿದ್ದಾರೆ. ಇನ್ನು ತೀರ್ಪಿನಿಂದ ಅರ್ಜಿದಾರ ಬಿ.ಕೆ ಪವಿತ್ರಾಗೆ ಹಿನ್ನೆಡೆಯಾಗಿದ್ದು ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ಯೋಚಿಸಿದ್ದಾರೆ.

Leave a Reply

Your email address will not be published. Required fields are marked *