ನಿರೀಕ್ಷೆ ಹುಸಿ: ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ ಪ್ರತಿಕ್ರಿಯೆ

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಚೊಚ್ಚಲ ಬಜೆಟ್ ಕುರಿತು ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಬಜೆಟ್ 2019 ರ ಕುರಿತು ಪ್ರತಿಕ್ರಿಯಿಸಿದ್ದಾರೆ.

ರೈತ ಉತ್ಪಾದಕ ಸಂಘಗಳ ಸ್ಥಾಪನೆಗೆ ಒತ್ತು, ಎಪಿಎಂಸಿಗಳಲ್ಲಿ ಆನ್ ಲೈನ್ ಮಾರುಕಟ್ಟೆ ಬಲಪಡಿಸುವ ಕಾರ್ಯಕ್ರಮ ಹಾಗೂ ಗ್ರಾಮೀಣ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆಗಳು ಸ್ವಾಗತಾರ್ಹ. ಆದರೆ ರೈತರ ಆತ್ಮಸ್ಥೈರ್ಯ ಹೆಚ್ಚಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಜಿಎಸ್ಟಿ ತೆರಿಗೆಯಲ್ಲಿ ರಾಜ್ಯದ ಪಾಲಿನ ಮೊತ್ತ ಕಡಿಮೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಪಾಲಿನಲ್ಲಿ ಸುಮಾರು 1600 ಕೋಟಿ ರೂ. ಗಳಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರಿಂದ ರಾಜ್ಯಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಪೆಟ್ರೋಲ್, ಡೀಸೆಲ್ ಗಳ ಮೇಲೆ ಸೆಸ್ ಏರಿಕೆ ಮಾಡಿರುವುದರಿಂದ ರಾಜ್ಯವು ಇಂಧನ ಮೇಲೆ ಸೆಸ್ ವಿಧಿಸಲು ಅವಕಾಶ ಕಡಿಮೆ ಮಾಡಿದಂತಾಗಿದೆ. ಅಲ್ಲದೆ, ಇಂಧನ ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೊರೆಯಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ರೈಲ್ವೆ ಯೋಜನೆಗಳಿಗೆ ಅದರಲ್ಲೂ ಸಬರ್ಬನ್ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡುವರೆಂದು ನಿರೀಕ್ಷಿಸಿದ್ದೆ. ಈ ನಿಟ್ಟಿನಲ್ಲಿ ಯಾವುದೇ ಘೋಷಣೆ ಮಾಡದಿರುವುದು ನಿರಾಶೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಆಯವ್ಯಯ ಕೇವಲ ಸರ್ಕಾರದ ಆಶಯ ತಿಳಿಸುವ ದಾಖಲೆಯಲ್ಲ. ಆಯವ್ಯಯ ಭಾಷಣ, ಜನರಿಗೆ ಮಾಹಿತಿ ಒದಗಿಸುವ ಪ್ರಮುಖ ಮಾಧ್ಯಮ. ಈ ಆಯವ್ಯಯದಲ್ಲಿ ಕೆಲವು ಉದ್ದೇಶಗಳನ್ನು ಉಲ್ಲೇಖಿಸಲಾಗಿದೆ. ಅದರಾಚೆಗೆ ಯಾವ ಮಾಹಿತಿಯೂ ಇಲ್ಲ. ಅದರಲ್ಲಿಯೂ ವಿಶೇಷವಾಗಿ ರೈಲ್ವೆ ಯೋಜನೆಗಳ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಆಕ್ಷೇಪಿಸಿದ್ದಾರೆ

Leave a Reply

Your email address will not be published. Required fields are marked *