ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಕೊಪ್ಪಳ : ಮಹಿಳಾ ಕಾನ್ಸಟೇಬಲ್‍ಗಳಾಗಿ ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡುತ್ತಿರುವ ತಾವೆಲ್ಲರೂ ಇಲಾಖೆಗೆ ಹಾಗೂ ಸಮಾಜಕ್ಕೆ ಕೀರ್ತಿ ತರುವಂತಹ ಕಾರ್ಯನಿರ್ವಹಿಸಬೇಕು ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಎಂ. ನಂಜುಂಡಸ್ವಾಮಿ ಅವರು ಕೊಪ್ಪಳ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಶುಕ್ರವಾರದಂದು ಆಯೋಜಿಸಲಾದ ಕೊಪ್ಪಳ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಪೊಲೀಸರು ಭಾರತ ದೇಶದ ಕೀರ್ತಿಯಾಗಿದ್ದಾರೆ. ಪೊಲೀಸರಿಗೆ ಒಂದು ವರ್ಷದಲ್ಲಿ ಕೇವಲ ಎರಡೆ ಹಬ್ಬಗಳು ಅವುಗಳೆಂದರೆ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಹುತಾತ್ಮ ದಿನ. ದೀಪಾವಳಿ, ಯುಗಾದಿ, ದಸರಾ, ರಮಜಾನ್, ಕ್ರಿಸ್‍ಮಸ್ ಹಾಗೂ ಅನೇಕ ಹಬ್ಬಗಳಲ್ಲಿ ಪೊಲೀಸ್‍ರು ಕರ್ತವ್ಯ ನಿರತವಾಗಿ ಸಾರ್ವಜನಿಕರೊಂದಿಗೆ ಪಾಲ್ಗೊಂಡು ಹಬ್ಬಗಳನ್ನು ಆಚರಿಸುತ್ತಾರೆ. ಇಂದು ಕೊಪ್ಪಳ ಪೊಲೀಸ್ ತರಬೇತಿ ಶಾಲೆಯಿಂದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿ ಪೂರ್ಣಗೊಳಿಸಿ ನಿರ್ಗಮಿಸಿ ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದು ತುಂಬಾ ಸಂತೋಷದ ವಿಷಯವಾಗಿದೆ.

ಇವರು ತಮ್ಮ ಮನೆಯ ಹಾಗೂ ಊರಿನ ಮತ್ತು ಜಿಲ್ಲೆಯ ಕೀರ್ತಿಯನ್ನು ತಂದಿದ್ದಾರೆ. ತರಬೇತಿ ಪೂರ್ಣಗೊಳಿಸಿದ ಎಲ್ಲಾ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಇಲಾಖೆಯ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಬೇಕು. ಹೊಸದಾಗಿ ಬರುವಂತಹ ಕಾನೂನು ಹಾಗೂ ಜ್ಞಾಪನ ಪತ್ರಗಳನ್ನು ಓದಿ ತಿಳಿದುಕೊಳ್ಳಬೇಕು. ಪೊಲೀಸ್ ಸಮವಸ್ತ್ರಕ್ಕೆ ಮತ್ತು ನಿಮ್ಮ ವೃತ್ತಿಗೆ ಹಾಗೂ ಅಧಿಕಾರಿಗಳನ್ನು ಸಹ ಗೌರವಿಸಿ. ಪೊಲೀಸ್ ಸಮವಸ್ತ್ರ ಧರಿಸಿ ತಾವುಗಳು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಲ್ಲಿ, ರಸ್ತೆಯಲ್ಲಿ ಸಂಚಾರ ಹೀಗೆ ಅನೇಕ ಸಮಯಗಳಲ್ಲಿ ಯಾವುದೇ ಕಳ್ಳತನ, ಕಾನೂನು ಉಲ್ಲಂಘನೆಯಂತಹ ಪ್ರಕರಣಗಳು ಆ ಭಾಗದಲ್ಲಿ ಆಗುವುದಿಲ್ಲ. ಏಕೆಂದರೆ ಜನರಲ್ಲಿ ಪೊಲೀಸ್ ಸಮವಸ್ತ್ರದ ಮೇಲಿರುವ ಭಯ. ಸಾಮಾನ್ಯವಾಗಿ ಪೊಲೀಸ್ ಯುನಿಫಾಮ್ ಕಂಡರೆ ಯಾವುದೇ ರೀತಿಯ ತಪ್ಪುಗಳು ಆಗುವುದಿಲ್ಲ. ಆದ್ದರಿಂದ ನೀವುಗಳು ಮುಖ್ಯವಾಗಿ ಪೊಲೀಸ್ ಸಮವಸ್ತ್ರಕ್ಕೆ ಗೌರವಿಸಿ ಎಂದು ಹೇಳಿದರು.

Leave a Reply

Your email address will not be published. Required fields are marked *