ಇಸ್ರೇಲ್ ವಿಜ್ಞಾನಿಗಳಿಂದ ವಿಶ್ವದ ಮೊಟ್ಟ ಮೊದಲ 3D ಹೃದಯ ಮುದ್ರಣ..!

ಇಸ್ರೇಲ್‌ನ ಟೆಲ್‌ ಅವೀವ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ 3ಡಿ ಹೃದಯ ಮುದ್ರಿಸುವ ಮೂಲಕ ಪ್ರಮುಖ ವೈದ್ಯಕೀಯ ಪ್ರಗತಿಯೊಂದನ್ನು ಸೃಷ್ಟಿಸಿದೆ. ಮಾನವ ಅಂಗಾಂಶಗಳು ಮತ್ತು ರಕ್ತದ ಮಾದರಿಗಳನ್ನು ಬಳಸಿಕೊಂಡು ಇದೇ ಮೊದಲ ಬಾರಿಗೆ ವಿಶ್ವದ ಮೊಟ್ಟಮೊದಲ 3ಡಿ ಪ್ರಿಂಟೆಡ್‌ ಹೃದಯವನ್ನು ಸೃಷ್ಟಿ ಮಾಡಿದೆ.

ಜನರು ಇದುವರೆಗೆ 3 ಡಿ ಮುದ್ರಿತ ಹೃದಯವನ್ನು ಸೃಷ್ಟಿಸಿದ್ದರೂ ಸಹ ಇದೇ ಮೊದಲ ಬಾರಿಗೆ ಜೀವಕೋಶಗಳು ಅಥವಾ ನಿಜವಾದ ರಕ್ತನಾಳಗಳನ್ನು ಮುದ್ರಿತ ಹೃದಯ ಸೃಷ್ಟಿ ಮಾಡಲು ಬಳಕೆ ಮಾಡಲಾಗಿದೆ. ಟೆಲ್‌ ಅವೀವ್ ವಿವಿಯ ಪ್ರೊಫೆಸರ್ ಟಾಲ್‌ ಡ್ವಿರ್ ನೇತೃತ್ವದಲ್ಲಿ ಈ ವಿಶೇಷವಾದ ಪ್ರಾಜೆಕ್ಟ್ ಮಾಡಲಾಗಿತ್ತು ಎಂದು ಪ್ರೊಫೆಸರ್ ಮಾಧ್ಯಮಗಳ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ತಂಡ ಯಶಸ್ವಿಯಾಗಿ ವಿನ್ಯಾಸಗೊಳಿಸಿ ಜೀವಕೋಶಗಳು, ರಕ್ತನಾಳಗಳು, ಮತ್ತು ಕುಹರಗಳುಳ್ಳ ಸಂಪೂರ್ಣ ಹೃದಯವನ್ನೇ ಮುದ್ರಿಸಲಾಗಿದೆ ಎಂದು ಡ್ವಿರ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೃದಯದ ಫೋಟೋಗಳು ವೈರಲ್‌ ಆಗಿದ್ದು, ಅದು ಮೊಲದ ಹೃದಯದಷ್ಟು ದೊಡ್ಡದಿದೆ. ಇನ್ನು, ಈ 3ಡಿ ಹೃದಯಕ್ಕೆ ಕುಗ್ಗುವ ಸಾಮರ್ಥ್ಯವಿದ್ದರೂ ಪೂರ್ಣ ಪಂಪಿಂಗ್‌ ಚಲನೆಯ ಮೆಕಾನಿಕ್ಸ್ ಅನ್ನು ಹೊಂದಿಲ್ಲ ಎಂದೂ ಡ್ವಿರ್ ತಿಳಿಸಿದ್ದಾರೆ.

ಈ ಪ್ರಗತಿಯಿಂದ ಭವಿಷ್ಯದಲ್ಲಿ ಸಂಪೂರ್ಣ ಮಾನವ ಗಾತ್ರದ ಹೃದಯಗಳನ್ನು ಮುದ್ರಿಸಲು ಬಳಕೆ ಮಾಡಬಹುದು. ಸಂಪೂರ್ಣ ಮಾನವ ಗಾತ್ರದ ಹೃದಯಗಳನ್ನು ಮುದ್ರಿಸಿದ ಬಳಿಕ ಹೃದಯ ಕಸಿಗೆ ಬಳಕೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

”ಬಹುಶ: ಇನ್ನು 10 ವರ್ಷಗಳಲ್ಲಿ ವಿಶ್ವದಾದ್ಯಂತ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಅಂಗಾಂಗ ಪ್ರಿಂಟರ್‌ಗಳು ಇರುತ್ತವೆ. ಈ ಕಾರ್ಯವಿಧಾನಗಳನ್ನು ನಿಯಮಿತವಾಗಿ ನಡೆಸಲಾಗುವುದು” ಎಂದು ಡ್ವಿರ್ ತಿಳಿಸಿದ್ದಾರೆ. ಅಲ್ಲದೆ, ನಿಜವಾದ ಹೃದಯದ ರೀತಿಯ 3ಡಿ ಹೃದಯವನ್ನು ಮುದ್ರಿಸುವುದು ನಮ್ಮ ತಂಡದ ಮುಂದಿನ ಗುರಿ” ಎಂದೂ ಅವರು ಹೇಳಿಕೊಂಡಿದ್ದಾರೆ.

ಜೀವಕ್ಕೆ ಅಪಾಯ ತಂದೊಡ್ಡುವುದನ್ನು ಕಡಿಮೆ ಮಾಡಲು ವಿಜ್ಞಾನಿಗಳು ಮೊದಲು ಸ್ಪ್ಲೀನ್‌, ಅಪೆಂಡಿಕ್ಸ್ ಹಾಗೂ ಮೂತ್ರಪಿಂಡದಂತಹ ಕಡಿಮೆ ಪ್ರಮುಖ ಅಂಗಗಳನ್ನು ಮೊದಲು ಮುದ್ರಿಸಬೇಕು. ನಂತರ ಹೃದಯ ಹಾಗೂ ಇತರೆ ದೊಡ್ಡ ಅಂಗಾಂಗಗಳನ್ನು ಮುದ್ರಿಸಬೇಕು ಎಂದು ಸಹ ಡ್ವಿರ್ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *