ಕಿಡಿಗೇಡಿಗಳ ಪುಂಡಾಟಕ್ಕೆ ಹಾಳಾಗುತ್ತಿವೆ ಹಂಪಿಯ ಸ್ಮಾರಕಗಳು

ಹಂಪಿ : ವಿಶ್ವ ವಿಖ್ಯಾತ ಹಂಪಿಯಲ್ಲಿನ ಐತಿಹಾಸಿಕ ಸ್ಮಾರಕಗಳ ಕಲ್ಲಿನ ಕಂಬಗಳು ಕಿಡಿಗೇಡಿಗಳ ಕೃತ್ಯಕ್ಕೆ ಹಾಳಾಗುತ್ತಿದ್ದು, ಸ್ಮಾರಕಗಳಿಗೆ ಸಂರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎನ್ನುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ. ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಆದರೆ, ಹಂಪಿಯ ಒಂಟೆ ಸಾಲು, ಗಜಶಾಲೆ ಹಿಂದೆ ಇರುವ ವಿಷ್ಣು ದೇವಸ್ಥಾನದ ಆವರಣದಲ್ಲಿನ ಕಂಬಗಳನ್ನು ಯಾರೋ ಕಿಡಿಗೇಡಿಗಳು ಬೀಳಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಹಾಡಹಗಲೇ ಕಿಡಿಗೇಡಿಗಳು ಕಲ್ಲಿನ ಕಂಬಗಳನ್ನು ಬೀಳಿಸಿರುವಂಥ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹಂಪಿಯ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ಸಂರಕ್ಷಣಾ ಇಲಾಖೆ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *