ದೇಶದ ಆರ್ಥಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಗಣತಿ ಅತ್ಯವಶ್ಯಕ : ಸೈಯದಾ ಅಯಿಷಾ

ಕೊಪ್ಪಳ : ದೇಶದ ಆರ್ಥಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಗಣತಿ ಅತ್ಯವಶ್ಯಕವಾಗಿದ್ದು, ಕೇಂದ್ರ ಸರ್ಕಾರವು 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಹೇಳಿದರು.

ಸಿಎಸ್‌ಸಿ ಸೆಂಟರ್‌ನಿಂದ 7ನೇ ಆರ್ಥಿಕ ಗಣತಿ 2019ರ ಕೈಗೊಳ್ಳುವ ಬಗ್ಗೆ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರದಂದು ಆಯೋಜಿಸಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.  

ಆರ್ಥಿಕ ಗಣತಿಯ ಮೂಲಕ ಲಭ್ಯವಾಗುವ ಮಾಹಿತಿಗಳು ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಲು, ಯೋಜನೆ ಸಿದ್ದಪಡಿಸಲು ಸರಕಾರಕ್ಕೆ ಮೂಲ ಅಂಕಿ ಅಂಶಗಳಾಗಿವೆ. ಸರ್ಕಾರದಿಂದ ಯಾವುದೇ ಹೊಸ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಲು ಆರ್ಥಿಕ ಗಣತಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟ ಮಂತ್ರಾಲಯವು ಕಾಮನ ಸರ್ವಿಸ್ ಸೆಂಟರ್, ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ & ಐಟಿ ಇದರ ಮೂಲಕ 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದೆ. ಈಗಾಗಲೇ 7ನೇ ಆರ್ಥಿಕ ಗಣತಿಯು ದೇಶಾದ್ಯಂತ ಚಾಲನೆಗೊಂಡಿದ್ದು, ಆರ್ಥಿಕ ಗಣತಿಯನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.

ಆರ್ಥಿಕ ಗಣತಿ ಕಾರ್ಯದಲ್ಲಿ ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗ್ರಾಮೀಣ ಅಥವಾ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆ, ಕಟ್ಟಡಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆಯನ್ನು ಮೊಬೈಲ್ ಆ್ಯಪ್ ಮೂಲಕ ಮಾಡಬೇಕು. ಆರ್ಥಿಕ ಗಣತಿ ಕಾರ್ಯವನ್ನು ತೃಪ್ತಿಕರವಾಗಿ ನಿಭಾಯಿಸಬೇಕಾಗಿದ್ದು, ಎಲ್ಲಾ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಇಂದು ಜಿಲ್ಲಾ ಮಟ್ಟದ ತರಬೇತಿಯನ್ನು ನೀಡಲಾಗುತ್ತಿದೆ.

ತಾಲೂಕ ಮಟ್ಟದಲ್ಲಿಯೂ ಸಹ ಈ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಗಣತಿದಾರರು ಮತ್ತು ಮೇಲ್ವಿಚಾರಕರು ತರಬೇತಿಯನ್ನು ಪಡೆದುಕೊಂಡು ತಮ್ಮ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ತರಬೇತುದಾರರಿಗೆ ಸೂಚನೆ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, 7ನೇ ಆರ್ಥಿಕ ಗಣತಿಯ ಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿದೆ. ಗಣತಿ ಕಾರ್ಯವನ್ನು ಕಾಮನ್ ಸರ್ವಿಸ್ ಸೆಂಟರ್ (ಸಿ.ಎಸ್.ಸಿ) ಮೂಲಕ ಕೈಗೊಳ್ಳಲಾಗುತ್ತದೆ. ನೋಂದಾಯಿತ ಗಣತಿದಾರರಿಗೆ ಹಂಚಿಕೆಯಾಗುವ ಗಣತಿ ಬ್ಲಾಕುಗಳ ವಿವರಗಳು ಮೊಬೈಲ್ ಆ್ಯಪ್ನಲ್ಲಿಯೇ ಲಭ್ಯ ಇವೆ. ಗಣತಿದಾರರು ತಮಗೆ ನೀಡಿರುವ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳ ಯಾವುದೇ ಘಟಕದಲ್ಲಿ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಉದ್ಯಮಗಳ ಪಟ್ಟಿಯನ್ನು ಮಾಡಬೇಕು.

ಪಟ್ಟಿ ಮಾಡುವಾಗ ನಿರ್ದಿಷ್ಟ ಕಟ್ಟಡ ಹೊಂದಿ ವ್ಯವಹಾರ ಮಾಡುವ ಉದ್ಯಮಗಳಲ್ಲದೆ ನಿರ್ದಿಷ್ಟ ಕಟ್ಟಡವಿಲ್ಲದೆ ಸಂತೆ, ಬೀದಿ ಬದಿಯ ವ್ಯಾಪಾರ, ಮನೆಯಲ್ಲಿಯೇ ಕುಳಿತು ನಿರ್ವಹಿಸುವ ಟೈಲರಿಂಗ್, ಮೇಣದ ಮತ್ತು ಅಗರ ಬತ್ತಿ ತಯಾರಿಕೆ, ಸೊಂಡಿಗೆ-ಹಪ್ಪಳ ತಯಾರಿಕೆ ಮತ್ತು ವಿವಿಧ ಸ್ವಉದ್ಯೋಗಗಳು, ಸಣ್ಣ ಪ್ರಮಾಣದ ಹೈನುಗಾರಿಕೆ ಇತ್ಯಾದಿ ಆರ್ಥಿಕ ಚಟುವಟಿಕೆ ನಡೆಸುವ ಉದ್ಯಮಗಳನ್ನು ಸರಿಯಾದ ರೀತಿಯಲ್ಲಿ ಎಣಿಕೆ ಮಾಡಬೇಕು. ಉದ್ದಿಮೆ ಮಾಲೀಕರ ಲಿಂಗವಾರು, ಸಾಮಾಜಿಕ ಗುಂಪುವಾರು ಮಾಹಿತಿಗಳು, ಗಂಡು, ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳುನ್ನೂ ಸಹ ನಮೂದಿಸಬೇಕು.

ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 3,25,000ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಉದ್ಯಮ ನಡೆಯಲಿ ಅಥವಾ ನಡೆಯದಿರಲಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ಸರ್ವೇ ಮಾಡಬೇಕು. ಯಾವುದೇ ಕುಟುಂಬ ಸಮೀಕ್ಷೆಯಿಂದ ಉಳಿಯದಿರಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದರು.

Leave a Reply

Your email address will not be published. Required fields are marked *