ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯಾವಶ್ಯಕ : ಸೋಮಶೇಖರ ಜುಟ್ಟಲ್

ಕೊಪ್ಪಳ: ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಸೈಬರ್, ಅರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪಿ.ಐ ಸೋಮಶೇಖರ ಜುಟ್ಟಲ್ ಹೇಳಿದರು.  

ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಮೇ. 14 ರಂದು) ನಗರದ ಬಿ.ಎಸ್. ಪವಾರ ಹೋಟೆಲ್‌ನ ಮೀಟಿಂಗ್ ಹಾಲ್‌ನಲ್ಲಿ ಬ್ಯಾಂಕುಗಳ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಏರ್ಪಡಿಲಾದ  ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ನಡೆಯುವ ಡೆಬಿಟ್, ಕ್ರೆಡಿಟ್ ಕಾರ್ಡ ಬಳಸಿ ಎಟಿಎಮ್ ವಿತ್ ಡ್ರಾ ವಂಚನೆ, ಒಟಿಪಿ ಪಡೆದು ಮಾಡುವಂತಹ ವಂಚನೆಗಳ ಪ್ರಕರಣಗಳು ಜರುಗುತ್ತಿವೆ. ಬ್ಯಾಂಕುಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಂತಹ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಇದರ ಬಗ್ಗೆ ಎಲ್ಲರಿಗೂ ತಿಳಿದಿರಬಹುದಾದ ವಿಷಯವಾಗಿದೆ ಆದರೂ ಸಹ ಈ ರೀತಿಯ ಮೋಸಕ್ಕೆ ಒಳಗಾಗುತ್ತಿದ್ದಾರೆ.

ಅಲ್ಲದೇ ಆನ್‌ಲೈನ್ ಶಾಪಿಂಗ್ ವಂಚನೆ, ಆನ್‌ಲೈನ್ ಸಾಲದ ವಂಚನೆ, ಒಎಲ್‌ ಎಕ್ಸ್ ನಲ್ಲಿ ವಾಹನ ಮಾರಾಟದ ವಂಚನೆ, ದೊಡ್ಡ ಮೊತ್ತದ ಹಣ ಹಾಗೂ ಕಾರುಗಳ ಬಹುಮಾನಗಳ ಆಮಿಷದ ವಂಚನೆ, ಮೊಬೈಲ್ ಟವರ್ ಹಾಕುವ ಹೆಸರಿನಲ್ಲಿ ಮಾಡುವ ವಂಚನೆ ಮತ್ತು ಉದ್ಯೋಗ ಕೊಡುವ ಅಥವಾ ಕೊಡಿಸುವ ಹೆಸರಿನಲ್ಲಿ ಮಾಡುವ ವಂಚನೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರು ಇಂತಹ ವಂಚನೆಗಳಲ್ಲಿ ಬಲಿಯಾಗುತ್ತಿಲ್ಲ. ಆದರೆ ತಿಳಿದಿರುವವರು ವಿದ್ಯಾವಂತರೇ ಇಂತಹ ಮೋಸಕ್ಕೊಳಗುತ್ತಿದ್ದಾರೆ. 

ಲೋನ್ ಕೇಳಿದರೇ ಬ್ಯಾಂಕುಗಳು ಕೊಡುವುದು ಕಷ್ಟ ಅಂತಹದ್ರಲ್ಲಿ ಆನ್‌ಲೈನ್ ಮೂಲಕ ನೀವು ಇಷ್ಟು ಮೊತ್ತ ಲೋನ್‌ಗೆ ಆಯ್ಕೆಯಾಗಿದ್ದಿರಿ. ಸ್ಪರ್ಧೆಯೇ ಇಲ್ಲದೇ ನೀವು ಇಷ್ಟು ಮೊತ್ತ ಮೊಬೈಲ್, ಬೈಕ್ ಕಾರು ಗೆದ್ದಿದ್ದಿರಿ ಎಂದು ನಿಮ್ಮ ಸಂಖ್ಯೆಗಳಿಗೆ ಕರೆ ಬರುವುದೆಲ್ಲವೂ ಸುಳ್ಳಾಗಿದ್ದು, ಇಂತಹ ಕರೆಗಳು ಬಂದರೆ ಅದಕ್ಕೆ ಸ್ಪಂದಿಸದಿರಿ. ನಿಮ್ಮ ಖಾತೆ ಸಂಖ್ಯೆ, ಪಿನ್, ಒಟಿಪಿಗಳಂತಹ ಯಾವುದೇ ಸಂಖ್ಯೆಗಳನ್ನು ಬ್ಯಾಂಕುಗಳು ಕೇಳುವುದಿಲ್ಲ. ಅಲ್ಲದೇ ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನವೂ ಸಹ ಎಚ್ಚರಿಕೆಯಿಂದ ವ್ಯವಹಾರ ಮಾಡಿ. 

ಆನ್‌ಲೈನ್ ಶಾಪಿಂಗ್ ವೇಳೆ ಯಾವುದೇ ಬಗೆಯ ಅಡ್ವಾನ್ಸ್ ಪೇಮೆಂಟ್ ವ್ಯವಹಾರಗಳಿಂದ ದೂರವಿರಿ. ಇವು ಎಲ್ಲವೂ ಸೈಬರ್ ಮತ್ತು ಆರ್ಥಿಕ ಅಪರಾಧಗಳಡಿ ಬರಲಿವೆ ಆದ್ದರಿಂದ ಸಾರ್ವಜನಿಕರು ಈ ಕುರಿತು ಜಾಗೃತರಾಗಬೇಕು. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕೊಪ್ಪಳ ಸೈಬರ್, ಅರ್ಥಿಕ ಮತ್ತು ಮಾದಕ ದ್ರವ್ಯ ಅಪರಾದ ಪೊಲೀಸ್ ಠಾಣೆಯ ಪಿ.ಐ ಸೋಮಶೇಖರ ಜುಟ್ಟಲ್ ಅವರು ಹೇಳಿದರು. 

Leave a Reply

Your email address will not be published. Required fields are marked *